ಅಡಿಸನ್, ತಾಮಸ್  
	
(1793-1860) ಇಂಗ್ಲೆಂಡಿನ ವೈದ್ಯ ; ಅಡ್ರಿನಲ್ ಗ್ರಂಥಿಯ ರಗಟೆಯ (ಕಾರ್ಟೆಕ್ಸ್) ಅಡಿಸನ್ನನ ರೋಗವನ್ನೂ ಕೇಡಿನ ರಕ್ತಕೊರೆಯನ್ನೂ (ಪರ್ನಿಷಸ್ ಅನೀಮಿಯ) ಚೆನ್ನಾಗಿ ವಿವರಿಸಿ ಹೆಸರಾದವ. ಲಂಡನ್ನಿನ ಗೈಸ್ ಆಸ್ಪತ್ರೆಯಲ್ಲಿ ರಿಚರ್ಡ್ ಬ್ರೈಟ್‍ನೊಂದಿಗೆ ವೈದ್ಯವಿದ್ಯೆ ಕಲಿಸುವವನಾಗಿದ್ದ. ಅವನ ಹೆಸರಿನ ಎರಡು ರೋಗಗಳನ್ನೂ ಮೊದಲು (1849) ಸೂಚಿಸಿ, ಮುಂದೆ ವಿವರಗಳಿರುವ ಪುಸ್ತಕವನ್ನೂ (1855) ಪ್ರಕಟಿಸಿದ.  ಅವನು ಕೊಟ್ಟಿರುವ ಅಂದಿನ ವಿವರಗಳು ಈಗಲೂ ನಿಜವೆನಿಸಿವೆ. ಒಳಸುರಿಕ ಗ್ರಂಥಿಗಳಲ್ಲಿ ಒಂದರ ರೋಗದ ಬದಲಾವಣೆಗಳನ್ನು ರೋಗಿಯ ಲಕ್ಷಣಗಳಿಗೆ ಸಂಬಂಧ ಮೊದಮೊದಲು ಕಲ್ಪಿಸಿದವ ಇವನೇ. ಇವನು ಮೊದಲು ಸೂಚಿಸಿದ ದಿನವನ್ನೇ (ಮಾರ್ಚಿ 15, 1849) ಒಳಸುರಿಕ ಶಾಸ್ತ್ರ ಹುಟ್ಟಿದ ದಿನ ಎನ್ನುವುದು. ಜಾನ್ ಮಾರ್ಗನ್‍ನೊಂದಿಗೆ, ಮೈಮೇಲೆ ವಿಷಕಾರಕಗಳ ಪ್ರಭಾವವನ್ನು ಇಂಗ್ಲಿಷಿನಲ್ಲಿ ಮೊತ್ತಮೊದಲು (1829) ಪ್ರಕಟಿಸಿದ. ಬ್ರೈಟ್‍ನೊಂದಿಗೆ ಬರೆದ ವೈದ್ಯವಿದ್ಯೆಯ ಮೂಲಪಾಠಗಳ ಮೊದಲನೆಯ ಸಂಪುಟ ಮಾತ್ರ (1839) ಹೊರಬಿತ್ತು. ಪುಪ್ಪುಸುರಿತ (ನ್ಯುಮೋನಿಯ), ಕ್ಷಯ, ಚರ್ಮರೋಗಗಳ ಮೇಲಿನ ಇವನ ಮುಖ್ಯ ಬರೆಹಗಳು ಬಹುವಾಗಿ ಗೈಸ್ ವರದಿಗಳಲ್ಲಿ ಬಂದುವು.

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ